ಮುಪ್ಪು - 
ಮುಪ್ಪು ಜೀವಿಯ ಬದುಕಿನ ಕೊನೆಯ ಹಂತ (ಸೆನಿಲಿಟಿ). ವಾರ್ಧಕ್ಯ ಪರ್ಯಾಯನಾಮ. ಪ್ರತಿಯೊಂದು ಜೀವಿಗೂ ಹುಟ್ಟಿದ ಗಳಿಗೆಯಿಂದ ದಿನಂಪ್ರತಿ ವಯಸ್ಸು ಕಳೆಯುತ್ತಿರುತ್ತದೆ. ಮುಪ್ಪು ಹತ್ತಿರವಾಗುತ್ತಿರುತ್ತದೆ. ಅನೇಕ ಹಿರಿಯ ವಯಸ್ಕರಿಗೆ ಮುಪ್ಪು ಬೇಡದ ಸ್ಥಿತಿ. ವಾರ್ಧಕ್ಯ ಹತ್ತಿರ ಬರುತ್ತ ಕಳವಳ. ಅಭದ್ರತೆ ಮತ್ತು ಅಂಜಿಕೆ ಅವರನ್ನು ಮುತ್ತುತ್ತವೆ ತಮ್ಮ ಅತ್ಯುತ್ತಮ ಕಾಲ ಕಳೆದು ಹೋಯಿತು ಇನ್ನು ಮುಂದೆ ಬರುವುದೆಲ್ಲ ನಿಕೃಷ್ಟ ಕಾಲವೆಂಬ ಚಿಂತೆ ಅವರದು. ಸಾಯುವ ಭಯವೂ ಸೇರಿಕೊಳ್ಳುತ್ತದೆ!

	ವೃದ್ಧರ ಸಂಖ್ಯೆ ಪ್ರಪಂಚದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂದು ರಾಷ್ಟ್ರಗಳ ಜನಗಣತಿಯಿಂದ ತಿಳಿಯಬರುತ್ತದೆ. ಇದು ಒಟ್ಟು ಜನಸಂಖ್ಯೆಯ ಶೇ.8ರಿಂದ 10ಕ್ಕೇರಿದೆ. ಹೀಗೆ ಮುದುಕರ ಜನಸಂಖ್ಯೆ ಹೆಚ್ಚುತ್ತಿರುವುದಕ್ಕೆ ಕಾರಣಗಳು ಉಂಟು: 1 ಸಾರ್ವಜನಿಕ ಆರೋಗ್ಯಪಾಲನಾ ಕ್ರಮಗಳಿಂದಾಗಿ ಸಾಂಕ್ರಮಿಕ ರೋಗಗಳನ್ನು ಹರಡುವ ರೋಗಕ್ರಿಮಿಗಳನ್ನು ನಾಶಪಡಿಸಿ ರೋಗ ಹರಡದಂತೆ ತಡೆಗಟ್ಟುತ್ತಿರುವುದು. 2 ವೈದ್ಯಚಿಕಿತ್ಸೆಯು ಪ್ರಗತಿಮಾರ್ಗದಲ್ಲಿದ್ದು ಹೊಸ ಪ್ರಯೋಗ ತಂತ್ರಗಳ ಸಹಾಯದಿಂದ ರೋಗದಿಂದ ನರಳುತ್ತಿರುವ ಹಿರಿಯ ವಯಸ್ಕರು ಗುಣಹೊಂದುತ್ತಿರುವುದು. 3 ವೈದ್ಯಕೀಯ ಶಿಕ್ಷಣದ ಮುನ್ನಡೆ ಮತ್ತು ರೋಗ ನಿವಾರಣಾ ಚಿಕಿತ್ಸಾ ಕೇಂದ್ರಗಳಲ್ಲಿ ನಡೆಯುತ್ತಿರುವ ವೈಜ್ಞಾನಿಕ ಸಂಶೋಧನೆ. ಆಗಾಗ್ಗೆ ಈ ಕೇಂದ್ರಗಳಿಂದ ಉತ್ತಮ ಔಷಧಿಗಳು ಹೊರಬೀಳುತ್ತಿದ್ದು ಅವುಗಳ ಸೇವನೆಯಿಂದ ಮನುಷ್ಯನ ಸರಾಸರಿ ಆಯುಷ್ಯ ಹೆಚ್ಚುತ್ತಲಿರುವುದು-ಇವೇ ಮುಂತಾದ ಕಾರಣಗಳಿಂದ ಸರಾಸರಿ ಆಯುಷ್ಯ ಪ್ರಮಾಣ ಹೆಚ್ಚಿದ್ದು ತತ್ಪರಿಣಾಮವಾಗಿ ವೃದ್ಧರ ಸಂಖ್ಯೆಯೂ ಹೆಚ್ಚಿದೆ.

	ಲಕ್ಷಣಗಳು: ಮುಪ್ಪು ಹತ್ತಿರವಾಗುತ್ತಿದ್ದಂತೆ ಕಣ್ಣಿಗೆ ಕಾಣುವ ಮತ್ತು ಕಾಣದ ಹಲವಾರು ಬದಲಾವಣೆಗಳು ಶರೀರದಲ್ಲಿ ಆಗುತ್ತವೆ. ಚರ್ಮವನ್ನು ಶರೀರದ ಅಂಗಗಳೊಂದಿಗೆ ಬಂಧಿಸಿ ಹಿಡಿದಿರುವ ಮಾಂಸಖಂಡಗಳ ಸ್ಥಿತಿಸ್ಥಾಪಕತ್ವ ಕಡಿಮೆಯಾಗಿ ಚರ್ಮ ಸುಕ್ಕು ಕಟ್ಟುತ್ತದೆ. ಬೆನ್ನುಮೂಳೆ ಮತ್ತು ಇತರ ಎಲುಬುಗಳು ಸಡಿಲಗೊಂಡು ಬೆನ್ನು ಬಾಗುತ್ತದೆ. ಕೂದಲುಗಳು ಉದುರಿ ತಲೆ ಬೋಡಾಗುತ್ತದೆ. ಇಲ್ಲವೆ ಕೂದಲು ಬೆಳ್ಳಗಾಗುತ್ತದೆ. ಧ್ವನಿ ಪೆಟ್ಟಿಗೆಯ ತಂತುಗಳ ಬಿಗಿ ಕಡಿಮೆಯಾಗಿ ಧ್ವನಿ ನಡುಗುತ್ತದೆ. ರುಚಿ, ವಾಸನೆ ಹಾಗೂ ದೃಷ್ಟಿ ಗುರುತಿಸುವಂಥ ಸಂವೇದನಾಂಗಗಳ ಶಕ್ತಿ ಕುಂದುತ್ತದೆ, ಹಲ್ಲುಗಳು ವಸಡಿನ ಸಂಬಂಧ ಕಳೆದುಕೊಂಡು ಬೀಳತೊಡಗುತ್ತವೆ. ಇವು ದೃಷ್ಟಿಗೋಚರ ಬದಲಾವಣೆಗಳು. ಇನ್ನು ಆಂತರಿಕವಾಗಿ ಹಲವಾರು ಬದಲಾವಣೆಗಳಾಗುತ್ತವೆ. ಕೊಲೆಸ್ಟೆರಾಲ್ ಅಂಶ ರಕ್ತನಾಳಗಳ ಒಳಭಾಗದಲ್ಲಿ ಶೇಖರಣೆಗೊಂಡು ವಿವಿಧ ಅಂಗಗಳಿಗೆ ರಕ್ತದ ಹಂಚಿಕೆಯ ಪರಿಮಾಣ ಕಡಿಮೆಯಾಗುತ್ತದೆ. ಈ ಬದಲಾವಣೆಗಳು ಮನುಷ್ಯ 30ರಿಂದ 50 ವರ್ಷದ ಅವಧಿಯಲ್ಲಿ ಮಂದಗತಿಯಲ್ಲೂ 50 ವರ್ಷ ದಾಟಿದ ಬಳಿಕ ತೀವ್ರಗತಿಯಲ್ಲೂ ಸಾಗುತ್ತವೆ.

	ವ್ಯಕ್ತಿ 60ನೆಯ ವಯಸ್ಸಿಗೆ ಕಾಲಿಟ್ಟಾಗ ಅವನಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಾಣಬಹುದು. ವಾಸಿಯಾಗದ ರೋಗದಿಂದ ನರಳಲೂಬಹುದು. ಹೃದಯರೋಗ, ರಕ್ತದ ಏರೊತ್ತಡ, ಸಂಧಿವಾತ, ಖಿನ್ನತೆ, ಮತಿಹೀನಸ್ಥಿತಿ (ಡೆಮೆನ್ಷಿಯ) ರೋಗಗಳು ಮುಪ್ಪಿನಲ್ಲಿ ಕಾಡುವ ರೋಗಗಳು. ಗ್ರಹಣಶಕ್ತಿ ಕುಂದಿ, ಶರೀರದ ಚೈತನ್ಯ ಮಾಯವಾಗುವುದು. ದೃಷ್ಟಿ ಮಂದವಾಗುವುದು. ಶ್ರವಣೇಂದ್ರಿಯ, ಘ್ರಾಣೇಂದ್ರಿಯ, ರಸನೇಂದ್ರಿಯ, ಸ್ಪರ್ಶೇಂದ್ರಿಯಗಳಲ್ಲಿಯ ಕಾರ್ಯಶೀಲತೆ ಕಡಿಮೆಯಾಗುವುದು. ಹೀಗೆ ದೇಹದ ಶಕ್ತಿಯನ್ನು ತಗ್ಗಿಸಿ ರೂಪವನ್ನು ವಿರೂಪಗೊಳಿಸುವ ಮುಪ್ಪು ಯಾರಿಗೆ ತಾನೆ ಪ್ರಿಯ?

	ಪರಿಣಾಮಗಳು: ಹಿರಿಯ ವಯಸ್ಕರಲ್ಲಿ ಉಂಟಾಗುವ ಮಾನಸಿಕ ಬದಲಾವಣೆಗಳು ಎಂಥ ಧೈರ್ಯಶಾಲಿಗಳನ್ನೂ ಅಂಜಿಸುವುದಾಗಿದೆ.

	1. ಚಿತ್ತೈ ಕಾಗ್ರತೆ ದುರ್ಬಲವಾಗಿ ಚಂಚಲವಾಗುವುದು. ನೆನಪು, ಇಲ್ಲದಂತಾಗುವುದು. ತಾರುಣ್ಯದಲ್ಲಿ ಸಂಭವಿಸಿದ ಘಟನೆಗಳಲ್ಲಿ ಗಲಿಬಿಲಿಯುಂಟಾಗಿ ಅವ್ಯವಸ್ಥೆಗಿಟ್ಟುಕೊಳ್ಳುವುವು. ಇತ್ತೀಚಿಗೆ ನಡೆದ ಸುದ್ದಿಗಳ ನೆನಪು ಕಡಿಮೆಯಾಗುವುದು, ಮರೆವು ಹೆಚ್ಚುತ್ತಲಿರುವುದು. ಪರಿಚಿತರನ್ನು ಗುರುತಿಸಲು ಆಗದಿರುವುದು: ತಿಥಿ, ವಾರ, ಪಕ್ಷವನ್ನು ತಪ್ಪಾಗಿ ಲೆಕ್ಕಮಾಡುವುದು: ಊಟ ಮಾಡಿದ್ದರೂ ಊಟ ಮಾಡಿಲ್ಲವೆಂದು ಹೇಳುವುದು.

	2. ಅಲ್ಪ ವಿಷಯಗಳಿಗೆಲ್ಲ ರೇಗಾಡುವರು. ತಾವು ತಿನ್ನುವ ಆಹಾರದಲ್ಲಿ ಧರಿಸುವ ಉಡುಪಿನಲ್ಲಿ ಆಪ್ತರ ನಡೆವಳಿಕೆಯಲ್ಲಿ ಸ್ವಲ್ಪ ಬದಲಾವಣೆ ಕಂಡರೂ ಸಹಿಸಲು ಅಶಕ್ತರಾಗುವರು. ಚಿಕ್ಕಮಕ್ಕಳು ಅತ್ತರೆ, ಗಲಾಟೆ ಮಾಡಿದರೆ ಸಹಿಸಲಾರದಷ್ಟು ದುರ್ಬಲರಾಗುವರು.

	3. ತಾವು ಕಲಿತ ಕಲೆಯನ್ನಾಗಲಿ ಕಸುಬನ್ನಾಗಲಿ ಸಮರ್ಥವಾಗಿ ಉಪಯೋಗ ಮಾಡಿಕೊಳ್ಳಲಾರದೆ ಹೋಗುವುದು. ವಾರ್ಧಕ್ಯದಲ್ಲಿ ಕೈಗಳು ಕೆಲಸ ಅಡ್ಡಾದಿಡ್ಡಿಯಾಗಿ ಸಾಗುವುದು. ನೈಪುಣ್ಯದಲ್ಲಿ ಕೊರತೆ ಬರುವುದು. ಸಾಮಾಜಿಕ ಕಾರ್ಯಗಳಲ್ಲಿ ಅಭಿಲಾಷೆ ಕಡಿಮೆಯಾಗುವುದು. ಕಲಿಯುವಿಕೆಯಲ್ಲಿ ಆಸಕ್ತಿ ಇಲ್ಲದಂತಾಗುವುದು.

	4. ಲೈಂಗಿಕಶಕ್ತಿ ಕುಂದುವುದು. ಹೆಂಗಸರು ನಲವತ್ತೆಂಟು ಐವತ್ತು ವರ್ಷದ ಸಮಯದಲ್ಲಿ ಋತುಬಂಧಕ್ಕೆ ಒಳಗಾಗುವರು. ಶಾರೀರಕ ಕಾರ್ಯದಲ್ಲಿ ಪರಿವರ್ತನೆಯಾಗುವುದೇನೋ ಸಹಜ. ಆದರೆ ತಾವು ಇನ್ನು ಬೇಕಿಲ್ಲದ ವಸ್ತುವೆಂಬ ಭಾವನೆ ಕೆಲವರಲ್ಲಿ ಬೇರೂರಿ ಖಿನ್ನರಾಗಿ ಬುಡವಿಲ್ಲದ ಭಯಕ್ಕೆ ಎಡೆಗೊಟ್ಟು ಒಂದು ರೀತಿಯ ಮನೋರೋಗ ತಂದುಕೊಳ್ಳುವರು. ಗಂಡಸರಲ್ಲೂ ಬದಲಾವಣೆಗಳುಗುವುದುಂಟು. ಅರುವತ್ತು ವರ್ಷ ತುಂಬುವ ಹೊತ್ತಿಗೆ ಲೈಂಗಿಕಜೀವನದಲ್ಲಿ ಹುರುಪು ಕಾಣದೆ ತಮ್ಮ ಇಡೀ ವ್ಯಕ್ತಿತ್ವವೇ ನಶಿಸಿ ಹೋಗುತ್ತಿದೆಯೆಂದು ವಿಷಣ್ಣರಾಗಿ ಚಿಂತೆಗೊಳಗಾಗುವರು.

	5. ಮುಪ್ಪಿನಲ್ಲಿ ಬಹುಮಂದಿ ಒಂಟಿಜೀವಿಗಳಾಗಿ ಉಳಿಯುವರು. ಪತಿ-ಪತ್ನಿಯ ಮರಣ ಮತ್ತು ಅವರ ಅಗಲಿಕೆ ಇವಕ್ಕೆ ಮುಖ್ಯ ಕಾರಣಗಳು. ಇದರ ದೆಸೆಯಿಂದ ಅವರಲ್ಲಿ ಜೀವನದ ಹೊಂದಾಣಿಕೆ ತಪ್ಪುವುದರಲ್ಲಿ ಆಶ್ಚರ್ಯವಿಲ್ಲ. ಮಕ್ಕಳೂ ಈಗ ದೂರವಾಗುತ್ತಾರೆ.

	6. ಸಾಮಾನ್ಯವಾಗಿ ಹಿರಿಯ ವಯಸ್ಕರು ಉದ್ಯೋಗಕ್ಕೆ ಅಸಮರ್ಥರೆಂದು ಸಂಸ್ಥೆಗಳು ನಿರಾಕರಿಸುವುವು. ತತ್ಫಲವಾಗಿ ಅವರು ಮಾನಸಿಕ ಚಿಂತೆಗೊಳಗಾಗುವರು. ಇಷ್ಟು ಕಾಲ ಅವರಲ್ಲಿದ್ದ ಭದ್ರತಾ ಸಂವೇದನೆಗೆ ಧಕ್ಕೆ ಒದಗಿ ದಿಕ್ಕು ತೋಚದಂತೆ ಆಗುವುದು. ಆದರೆ ಹಿರಿಯ ವಯಸ್ಕರು ಉದ್ಯೋಗಕ್ಕೆ ಅಷ್ಟು ಅಸಮರ್ಥರೇನಲ್ಲ. ಬಹಳ ವರ್ಷದಿಂದಲೂ ಕೆಲಸಮಾಡಿ ಹಲವಾರು ರೀತಿಯಲ್ಲಿ ಅನುಭವ ಸಂಪಾದಿಸಿರುವುದರಿಂದ ವೃತ್ತಿಯನ್ನು ಜಾಣ್ಮೆಯಿಂದ ನಡೆಯಿಸಲು ತರುಣರಿಗಿಂತ ಸಮರ್ಥರಾಗಿರುತ್ತಾರೆ.

	ಸಲಹೆಗಳು: 1 ಹಿರಿಯ ವಯಸ್ಕರು ಉದ್ಯೋಗದಿಂದ ನಿವೃತ್ತರಾದಮಾತ್ರಕ್ಕೆ ನಿರುತ್ಸಾಹಿಗಳಾಗಬೇಕಿಲ್ಲ. ತಾವು ಕಿರಿಯರಾಗಿದ್ದಾಗ ಕಲಿತ ಉಪಕಸುಬನ್ನೋ ಉಪಯುಕ್ತ ರೀತಿಯಲ್ಲಿ ಕಾಲಕಳೆಯಬಹುದು. ಮುಪ್ಪು ಅನಿವಾರ್ಯವೆಂದು ಭಾವಿಸಿ ಅದನ್ನು ಸಹಜರೀತಿಯಲ್ಲಿ ಬರಮಾಡಿಕೊಳ್ಳುವುದು ಒಳ್ಳೆಯದು. 2 ತಮ್ಮ ತಮ್ಮ ಸಂಸ್ಕøತಿಯನ್ನು ಅನುಸರಿಸಿ ಮತಸಂಬಂಧ ಕಾರ್ಯದಲ್ಲಿ ತೊಡಗುವುದು ಆತ್ಮಗೌರವವನ್ನು ಹೆಚ್ಚಿಸುತ್ತದೆ. ಮಾನಸಿಕ ಆರೋಗ್ಯಕ್ಕೆ ತಳಹದಿ ಆತ್ಮಗೌರವ. 3. ಕಬ್ಬಿಣ ಮತ್ತು ಕ್ಯಾಲ್ಸಿಯಮ್ ಧಾತುಗಳಿಂದ ಕೂಡಿದ ಆಹಾರವನ್ನು ಧಾರಾಳವಾಗಿ ಸೇವಿಸಿದರೆ ಶರೀರದ ದುರ್ಬಲತೆ ಕಡಿಮೆ ಮಾಡಿಕೊಳ್ಳಬಹುದು. 4. ಕೆಲವು ರಾಷ್ಟ್ರ ಹಾಗೂ ರಾಜ್ಯ ಸರ್ಕಾರಗಳು ಗೊತ್ತಾದ ವಯಸ್ಸು ಮೀರಿದ ಪ್ರತಿಯೊಬ್ಬ ಅನಾಥಪ್ರಜೆಗೂ ತಿಂಗಳಿಗೊಂದಾವರ್ತಿ ವೃದ್ಧಾಪ್ಯ ವೇತನ ಕೊಡುತ್ತಿರುವ ಪದ್ಧತಿ ಶ್ಲಾಘನೀಯವಾದುದು. ಇದರ ದೆಸೆಯಿಂದ ಹಿರಿಯ ವಯಸ್ಕರಲ್ಲಿ ಹಣಕಾಸಿನ ಅಭಾವ ಕಡಿಮೆಯಾಗಿ ಸ್ವಲ್ಪ ಮಟ್ಟಿಗೆ ಅವರು ನೆಮ್ಮದಿಯಿಂದ ಬದುಕಲು ಸಹಾಯವಾಗುತ್ತಿದೆ. ಕರ್ನಾಟಕ ಸರ್ಕಾರವೂ ಇಂಥ ಯೋಜನೆಯನ್ನು ಹಮ್ಮಿಕೊಂಡಿದೆ. 5 ಸದಾ ಜನಸಂಪರ್ಕ ಇಟ್ಟುಕೊಳ್ಳಲು ಹಿರಿಯ ವಯಸ್ಕರು ಯತ್ನಿಸಬೇಕು. ಇದರಿಂದಾಗಿ ತಾವು ಒಂಟಿಯಲ್ಲ ಎಲ್ಲರಿಗೂ ತಾವು ಬೇಕು ಎನ್ನುವ ಭಾವನೆ ಮೂಡುತ್ತದೆ. ಭಾರತೀಯ ಕುಟುಂಬಗಳಲ್ಲಿ ಹಿರಿಯ ವಯಸ್ಕರಿಗೆ ಮಾಡಲು ಸಾಕಷ್ಟು ಕೆಲಸವಿರುತ್ತದೆ. ಅಂಗಡಿಗೆ ಹೋಗಿ ಕಾಯಿ ಪಲ್ಯ ಕೊಂಡುತರುವುದು ಮೊಮ್ಮಕ್ಕಳ ಆಟಪಾಠಗಳಲ್ಲಿ ಆಸಕ್ತಿ ತೋರಿಸುವುದು. ಗ್ರಂಥಗಳನ್ನು ಓದುವುದು. ದೇವರ ಧ್ಯಾನ ಪೂಜೆಯಲ್ಲಿ ತೊಡಗುವುದು. ಗುಡಿಗಳಿಗೆ ಮತ್ತು ಮಠಗಳಿಗೆ ಹೋಗಿ ಬರುವುದು. ಪುರಾಣ ಪುಣ್ಯಕಥೆಗಳನ್ನು ಕೇಳುವುದು. ಮನೆಯ ಅಂಗಳದಲ್ಲಿರುವ ಗಿಡಗಳಿಗೆ ನೀರು ಹಾಕುವುದು ಮುಂತಾದ ಚಟುವಟಿಕೆಗಳಿಂದ ಸದಾ ಕಾರ್ಯಮಗ್ನರಾಗಿರಬಹುದು. 6 ಹಿರಿಯ ವಯಸ್ಕರನ್ನು ತಾವು ಬಾಳಿಬದುಕಿದ ಮನೆಯಿಂದ ಹೊರದೂಡುವುದು ಭಾರತೀಯ ಸಂಸ್ಕøತಿಗೆ ವಿರುದ್ಧ. ಆದರೆ ಕೆಲವು ಪಾಶ್ಚಾತ್ಯ ದೇಶಗಳು ಕುಟುಂಬತ್ಯಕ್ತರಾದ ಮುದುಕರಿಗೆ ಆಶ್ರಯ ನೀಡಲು ಆಶ್ರಮಗಳನ್ನು ಏರ್ಪಡಿಸಿರುವರು. ಇವುಗಳಿಗೆ ಸರ್ಕಾರದ ಸಹಾಯ ಮತ್ತು ಬೆಂಬಲವಿರುತ್ತದೆ. ಭಾರತದ ಕೆಲವು ದೊಡ್ಡ ನಗರಗಳಲ್ಲಿ ಇಂಥ ಆಶ್ರಮಗಳನ್ನು ಸ್ಥಾಪಿಸಲಾಗಿದೆ. 7 ದೈಹಿಕ ಮತ್ತು ಮಾನಸಿಕ ದುರ್ಬಲತೆಯನ್ನು ತಡೆಗಟ್ಟಲು ಮತ್ತು ತೊಂದರೆಗೊಳಗಾದ ಹಿರಿಯ ವಯಸ್ಕರು ತಮ್ಮ ಜೀವನವನ್ನು ಪುನರ್‍ವ್ಯಸ್ಥೆಗಳಿಸಲು ಸಮರ್ಥರಾಗುವಂತೆ ಸಹಾಯ ಸಲಹೆ ಏರ್ಪಾಡೂ ಇದೆ. ಭಾರತದಲ್ಲೂ ಇಂಥ ಸಂಸ್ಥೆಗಳನ್ನು ಸ್ಥಾಪಿಸಲು ಪ್ರಯತ್ನ ನಡೆಯಬೇಕು. 8. ಸಮೀಪದಲ್ಲಿರುವ ವೈದ್ಯರ ನೆರವಿನಿಂದ ಅನಾರೋಗ್ಯವನ್ನು ನಿಭಾಯಿಸಬೇಕು.

	ಚಿರಂಜೀವಿ ಆಗಿರಬೇಕು ಇಲ್ಲದೆ ಜೀವನಪರ್ಯಂತ ತರುಣನಾಗಿರಬೇಕು ಎಂಬ ಹಂಬಲ ಕೆಲವು ರಾಜರಲ್ಲಿ ಹಾಗೂ ತತ್ತ್ವಜ್ಞಾನಿಗಳಲ್ಲಿ ಇತ್ತೆಂಬ ಸಂಗತಿ ಇತಿಹಾಸ ಪ್ರಸಿದ್ಧ. ತಮ್ಮ ಅಪೇಕ್ಷೆ ಈಡೇರಿಸಿಕೊಳ್ಳಲು ಹಲವು ಅವೈಜ್ಞಾನಿಕ ಪ್ರಯತ್ನಗಳನ್ನು ಅವರು ಕೈಕೊಂಡಿದ್ದರಾದರೂ ಅವು ಫಲಿಸಲಿಲ್ಲ.

	ಮೊತ್ತಮೊದಲಿಗೆ ವಯೋಮಾನ ಹಾಗೂ ಮುಪ್ಪಿನ ಮೇಲೆ ವೈಜ್ಞಾನಿಕ ಪ್ರಯೋಗ ನಡೆಸಿದ ಕೀರ್ತಿ 19ನೆಯ ಶತಮಾನದ ಆಗಸ್ಟ್ ಹೀಸ್‍ಮನ್ನರಿಗೆ ಸಲ್ಲುತ್ತದೆ. ಅಂದಿನಿಂದ ಈ ತನಕವೂ ಹಲವು ವಿಜ್ಞಾನಿಗಳು ಮುಪ್ಪಿನ ಹಾಗೂ ವಯೋಮಾನದ ಬಗ್ಗೆ ಹಲವಾರು ಪ್ರಯೋಗಗಳನ್ನು ಮಾಡಿ ಅನೇಕ ನಿಗೂಢ ವಿಷಯಗಳನ್ನು ಬೆಳಕಿಗೆ ತಂದಿದ್ದಾರೆ. ಮುಂದಿನ ಮಾನವ ಈ ಮುಪ್ಪನ್ನು ಎದುರಿಸಿ ನಿಲ್ಲಬಲ್ಲನೆ? ಇದಕ್ಕೆ ಕಾಲವೊಂದೇ ಉತ್ತರ ನೀಡಬೇಕು.	
(ಸಿ.ಕೆ.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ